ಮೆಲ್ಬರ್ನ್
ಆಸ್ಟ್ರೇಲಿಯದ ದೊಡ್ಡ ನಗರಗಳ ಪೈಕಿ ಎರಡನೆಯದು. ವಿಕ್ಟೋರಿಯ ರಾಜ್ಯದ ರಾಜಧಾನಿ. ವಾಣಿಜ್ಯ ಮತ್ತು ಕೈಗಾರಿಕೆಯ ಪ್ರಮುಖ ಕೇಂದ್ರ ನಗರವಾಗಿದ್ದು ಫೋರ್ಟ್ ಫಿಲಿಪ್‍ಕೊಲ್ಲಿ ಬಳಿಯಿದೆ. ನಗರ ವಿಸ್ತೀರ್ಣ 5,960 ಚಕಿಮೀ. ಜನಸಂಖ್ಯೆ 28,90, 700 (1984). ಉಷ್ಣಾಂಶ ಜುಲೈ ತಿಂಗಳಲ್ಲಿ 130ಛಿ ಜನವರಿಯಲ್ಲಿ 260ಛಿ. ವಾರ್ಷಿಕ ಸರಾಸರಿ ಮಳೆ 657 ಮಿಮೀ. ಈ ನಗರದಲ್ಲಿ ರಾಜ್ಯ ವಿಕ್ಟೋರಿಯ ಗ್ರಂಥಾಲಯ, ಸಂಸತ್‍ಭವನ, ಅನೇಕ ಮುಖ್ಯ ಸುಂದರ ಕಟ್ಟಡಗಳು ಇವೆ. ನಗರದ ಉದ್ದಕ್ಕೂ ಹರಿಯುವ ಯರ ನದಿಯ ಅಕ್ಕಪಕ್ಕದಲ್ಲಿ ಸುಂದರ ಉದ್ಯಾನಗಳನ್ನೂ ತೋಟಗಳನ್ನೂ ನಿರ್ಮಿಸಲಾಗಿದೆ. ಫ್ಲೇಮಿಂಗ್‍ಟನ್ ವೈಹಾಳಿಪಥದಲ್ಲಿ (ರೇಸ್‍ಕೋರ್ಸ್) ಪ್ರತಿ ವರ್ಷವೂ ಮೆಲ್ಬರ್ನ್‍ಕಪ್ ಎಂಬ ಪ್ರಸಿದ್ಧ ಕುದುರೆ ಜೂಜು ನಡೆಯುತ್ತದೆ.

	ನಗರದಲ್ಲಿ ಲಾತ್ರೋಬ್ (1964), ಮೆಲ್ಬರ್ನ್ (1855), ಮತ್ತು ಮೊನಾಷ್ (1958) ಎಂಬ ವಿಶ್ವವಿದ್ಯಾಲಯಗಳಿವೆ. ಎಂಜಿನಿಯರಿಂಗ್ ಶಿಕ್ಷಣದಲ್ಲಿ ಪ್ರಾವೀಣ್ಯ ಗಳಿಸುವವರಿಗೆ ದಿ ರಾಯಲ್ ಮೆಲ್ಬರ್ನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಸಂಸ್ಥೆಯುಂಟು. ಸುಪ್ರಸಿದ್ಧ ಗಾನಗೋಷ್ಠಿಗಳೂ ನಾಟಕ ಪ್ರಹಸನಗಳೂ ವಿಕ್ಟೋರಿಯ ಕಲಾಕೇಂದ್ರದಲ್ಲಿ (1968) ಜರುಗುತ್ತವೆ. ದಿ ನ್ಯಾಷನಲ್ ಗ್ಯಾಲರಿ ಆಫ್ ವಿಕ್ಟೋರಿಯ ಎಂಬುದು ಪ್ರಖ್ಯಾತ ಕಲಾವಸ್ತು ಸಂಗ್ರಹಾಲಯ.

	ನಗರವಾಸಿಗಳ ಪೈಕಿ ಬಹುಮಂದಿ ಬ್ರಿಟಿಷ್ ಮೂಲದವರು. ಇಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಮುಕ್ಕಾಲುವಾಸಿ ಮಂದಿ ಆಸ್ಟ್ರೇಲಿಯದಲ್ಲೇ ಹುಟ್ಟಿ ಬೆಳೆದವರು. ಇಂಗ್ಲೆಂಡ್, ಗ್ರೀಸ್, ಇಟಲಿ ಮತ್ತಿತರ ಯೂರೋಪ್ ರಾಷ್ಟ್ರಗಳಿಂದ ವಲಸೆ ಬಂದು ಇಲ್ಲಿ ನೆಲೆಸಿರುವವರೂ ಉಂಟು. ಇವರು ಎರಡನೆಯ ಮಹಾಯುದ್ಧ ಸಮಯದಲ್ಲಿ ಈ ನಗರಕ್ಕೆ ಬಂದು ತಳವೂರಿದವರು. ಸುಮಾರು 2700 ಮಂದಿ ಆಸ್ಟ್ರೇಲಿಯದ ಮೂಲವಾಸಿಗಳು ಇಲ್ಲಿ ನೆಲೆಸಿದ್ದಾರೆ. ನಗರವಾಸಿಗಳಲ್ಲಿ ಶೇಕಡಾ 70 ರಷ್ಟು ಕುಟುಂಬಗಳು ಸ್ವಂತ ಮನೆಗಳನ್ನು ಹೊಂದಿವೆ. ನಗರದ ಪೂರ್ವ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಚಿಕ್ಕ ಚಿಕ್ಕ ಕುಟುಂಬಗಳಿರುವ ಉಪನಗರಗಳಿವೆ. ನಗರದ ಎಲ್ಲ ದಿಕ್ಕಿಗೂ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಹೆದ್ದಾರಿಗಳಲ್ಲಿ ವಾಹನ ಸಂದಣಿ ಹೆಚ್ಚು.

	ಸ್ವಯಂಚಲಿ ಹಾಗೂ ಇನ್ನಿತರ ಯಂತ್ರಗಳು, ರಾಸಾಯನಿಕಗಳು, ಆಹಾರ ಪದಾರ್ಥಗಳು, ನೇಯ್ದ ಸರಕುಗಳು ಇಲ್ಲಿಯ ಪ್ರಮುಖ ಉತ್ಪನ್ನಗಳು. ನಗರದ ಸುಮಾರು 10,000 ವಿವಿಧ ಕಾರ್ಖಾನೆಗಳು ಸುಮಾರು 4,00,000 ಮಂದಿಗೆ ಕೆಲಸ ಒದಗಿಸಿವೆ. ನಗರದಲ್ಲಿ ಬ್ಯಾಂಕುಗಳೂ ಜೀವ ವಿಮಾಕಚೇರಿಗಳೂ ಎಸ್ಟೇಟ್ ಕಂಪನಿಗಳೂ ಇವೆ. ಈ ನಗರದಲ್ಲೇ ಆಸ್ಟ್ರೇಲಿಯದ ದೊಡ್ಡ ಕೈಗಾರಿಕಾ ನಿಗಮವಾದ ಬ್ರೋಕೆನ್ ಹಿಲ್ ಪ್ರೊಪ್ರೈಟರಿ ಕಂಪನಿಯ ಪ್ರಧಾನ ಕಚೇರಿ ಇದೆ. ಈ ಕಂಪೆನಿ ಉಕ್ಕು ತಯಾರಿಕೆಗೆ ಉಕ್ಕಿನ ಉತ್ಪನ್ನಗಳಿಗೆ ಪ್ರಸಿದ್ಧಿ. ಮೆಲ್ಬರ್ನ್ ಉತ್ತಮ ಬಂದರಾದ್ದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಿದೆ. ಟ್ಯುಲಮೆರೈನ್ ಎಂಬಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

	ಮೂಲನಿವಾಸಿಗಳಿಂದ ಕೂಡಿದ್ದ ಈ ನಗರಕ್ಕೆ ಮೊದಲನೆಯವನಾಗಿ ಕುರಿ ಸಾಗಾಣಿಕೆಗಾಗಿ ವಿಶಾಲ ಪ್ರದೇಶದ ಆವಶ್ಯಕತೆಯಿದ್ದ ಟಾಸ್ಮೇನಿಯಾ ದ್ವೀಪದ ಒಂದು ಗುಂಪಿನ ಪ್ರತಿನಿಧಿಯಾಗಿ ಬಂದ ಬ್ಯಾಟ್‍ಮನ್, ಈ ಪ್ರದೇಶವನ್ನು 1835ರ ಜೂನ್ ತಿಂಗಳಲ್ಲಿ ಗುರುತಿಸಿದ. ಸ್ಥಳೀಯ ಮೂಲನಿವಾಸಿಗಳಿಗೆ ಕಂಬಳಿಯನ್ನು, ಯುದ್ಧ ಕೊಡಲಿಗಳನ್ನು ಮತ್ತಿತರ ಸಾಮಗ್ರಿಗಳನ್ನು ಕೊಟ್ಟು ಅವರಿಂದ 240,000 ಹೆಕ್ಟೇರ್ ಪ್ರದೇಶವನ್ನು ಕೊಂಡುಕೊಂಡ. 1835 ರ ಅಕ್ಟೋಬರ್ ತಿಂಗಳಲ್ಲಿ ಜಾನ್ ವಾಸ್ಕೋಫಾಕ್‍ನರ್ ಎಂಬವನ ನೇತೃತ್ವದಲ್ಲಿ ಟಾಸ್‍ಮೇನಿಯಾದ ಮತ್ತೊಂದು ಗುಂಪು ಇಲ್ಲಿಗೆ ಆಗಮಿಸಿತು. ವಿಲಿಯಮ್ ಲ್ಯಾಂಬ್, ವೈಕೌಂಟ್ ಮೇಲ್ಬರ್ನ್ (ಬ್ರಿಟಿಷ್ ಪ್ರಧಾನಿ) ಅವರ ಗೌರವಾರ್ಥ ನ್ಯೂ ಸೌತ್‍ವೇಲ್ಸ್‍ನ ರಾಜ್ಯಪಾಲ ಇದಕ್ಕೆ ಮೇಲ್ಬರ್ನ್ ಎಂಬುದಾಗಿ ನಾಮಕರಣ ಮಾಡಿದ.

	1847 ರಲ್ಲಿ ಮೆಲ್ಬರ್ನ್ ಒಂದು ನಗರವೆಂದು ರಾಜ್ಯಕ್ಕೆ ಸೇರ್ಪಡೆಯಾಯಿತು. 1851 ರಲ್ಲಿ ನ್ಯೂಸೌತ್‍ವೇಲ್ಸ್‍ನ ಭಾಗವೊಂದು ಪ್ರತ್ಯೇಕವಾಗಿ ವಿಕ್ಟೋರಿಯಾ ಎಂದು ನಾಮಕರಣಗೊಂಡಿತು. ಮೆಲ್ಬರ್ನ್ ಅದರ ರಾಜಧಾನಿಯಾಯಿತು. ಅದೇ ವರ್ಷ ಗಣಿ ಕೆಲಸಗಾರರು ವಿಕ್ಟೋರಿಯಾ ಪ್ರಾಂತ್ಯದಲ್ಲಿ ಚಿನ್ನವನ್ನು ಶೋಧಿಸಿದರು. ಪರಿಣಾಮವಾಗಿ ಗಣಿಕೆಲಸಗಾರರ, ಮಾಲೀಕರ ಪೈಪೋಟಿ ಆರಂಭವಾಯಿತು. ಇದರಿಂದಾಗಿ ಜನಸಂಖ್ಯೆ 23,000 918510 ಇದ್ದದ್ದು 140,000 (1861) ಆಯಿತು. ಸಿಡ್ನಿ ನಗರ ಬೆಳೆಯುವ ತನಕ (1902) ಮೆಲ್ಬರ್ನ್ ಆಸ್ಟ್ರೇಲಿಯದ ದೊಡ್ಡ ನಗರವೆಂದೇ ಖ್ಯಾತಿಗಳಿಸಿತ್ತು. ಅಲ್ಲದೆ 1901 - 27 ರ ತನಕ ಮೆಲ್ಬರ್ನ್ ಆಸ್ಟ್ರೇಲಿಯದ ರಾಜಧಾನಿಯಾಗಿತ್ತು. ಅನಂತರ ಈ ಸ್ಥಾನವನ್ನು ಕ್ಯಾನ್‍ಬೆರಾ ಆಕ್ರಮಿಸಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ (1939 - 45) ಈ ನಗರದಲ್ಲಿ ಅನೇಕ ಹೊಸ ಕೈಗಾರಿಕೆಗಳೂ ವಾಣಿಜ್ಯ ಸಂಸ್ಥೆಗಳೂ ಸ್ಥಾಪಿತಗೊಂಡವು. ಅದಕ್ಕನುಸಾರವಾಗಿ ದುಡಿಯುವ ಕೆಲಸಗಾರರೂ ಬಂದರು. 1950 - 60 ರ ಅವಧಿಯಲ್ಲಿ ನಗರ ಶೀಘ್ರಗತಿಯಲ್ಲಿ ಬೆಳೆಯಿತು.
(ಆರ್.ಎಂ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ